ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಭಾಷಾವಾರು ಪ್ರಾಂತ್ಯಗಳ ರಚನೆಯ ಹಲವು ಉದ್ದೇಶಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಧಾನವಾಗಿ ಬಳಕೆಯಲ್ಲಿರುವ ಭಾಷೆಯಲ್ಲಿ ಆಡಳಿತವನ್ನು ನಡೆಸುವುದು ಒಂದಾಗಿರುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ವಿಚಾರದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಹಿಂದೆ ಇದ್ದ ಸ್ಥಿತಿಯೇ ಆನಂತರದ ವರ್ಷಗಳಲ್ಲೂ ಮುಂದುವರೆಯಿತು. ಆಡಳಿತ ಎಂದರೆ ಆಂಗ್ಲ ಭಾಷೆಯಲ್ಲಿನ ಆಡಳಿತವೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸುವ ಪ್ರಯತ್ನವಾಗಿ ಸರ್ಕಾರವು ಕರ್ನಾಟಕ ರಾಜಭಾಷಾ ಅಧಿನಿಯಮ 1963 ಎಂಬ ಒಂದು ಕಾಯಿದೆಯನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡವು ರಾಜ್ಯದ ಅಧಿಕೃತ ಆಡಳಿತ ಭಾಷೆಯೆಂದು ಘೋಷಿಸಿತು. ಆದಾಗ್ಯೂ ಉದ್ದೇಶಿತ ಪ್ರಮಾಣದಲ್ಲಿ ಕನ್ನಡದ ಬಳಕೆ ಆಗದಿರುವುದನ್ನು ಮನಗಂಡ ಸರ್ಕಾರವು ಕನ್ನಡ ಬಳಕೆಯ ಬಗ್ಗೆ ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ನೀಡಲು ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ: 10-02-1983 ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿಯನ್ನು ಮತ್ತು 26-08-1985ರಲ್ಲಿ ಶ್ರೀ ಪಾಟೀಲಪಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಕನ್ನಡ ಕಾವಲು ಸಮಿತಿಯನ್ನೂ ನಂತರ 1992ರಲ್ಲಿ ಶ್ರೀ ಜಿ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನೂ ರಚಿಸಲಾಯಿತು. ಇವುಗಳು ಸರ್ಕಾರದ ಕಾರ್ಯಕಾರಿ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದವು. ಶ್ರೀ ಜಿ. ನಾರಾಯಣ ಅವರ ಕಾರ್ಯಾವಧಿಯ ನಂತರ ಡಾ. ಹೆಚ್. ನರಸಿಂಹಯ್ಯ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 1994 ಎಂಬ ಒಂದು ಕಾಯಿದೆಯನ್ನು ರಚಿಸಿ 1ನೇ ನವೆಂಬರ್ 1995ರಿಂದ ಅದನ್ನು ಜಾರಿಗೊಳಿಸಲಾಯಿತು. ಈ ಅಧಿನಿಯಮದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಪ್ರಾಧಿಕಾರಕ್ಕೆ ಸ್ವಾಯತ್ತತೆ ಮತ್ತು ಶಾಸನಬದ್ಧ ಸ್ಥಾನಮಾನಗಳನ್ನು ನೀಡಲಾಗಿದೆ.

ಡಾ. ಹೆಚ್. ನರಸಿಂಹಯ್ಯ ಅವರ ರಾಜೀನಾಮೆಯ ನಂತರ 1996ರಲ್ಲಿ ಪ್ರೊ. ಚಂದ್ರಶೇಖರ ಪಾಟೀಲ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಅವರ ಅವಧಿಯ ನಂತರ 2000ರಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಮತ್ತು ಅವರ ಅವಧಿಯ ನಂತರ 2003ರಲ್ಲಿ ಶ್ರೀ ಬಿ.ಎಂ. ಇದಿನಬ್ಬ ಅವರು ಅಧ್ಯಕ್ಷರಾಗಿ ನೇಮಕಗೊಂಡರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಥಾಪನೆಯಾದ ನಂತರ, ಎಲ್ಲ ರಾಜ್ಯ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿದೆ. ಕನ್ನಡವನ್ನು ಬಳಸದಿದ್ದರೆ, ಪ್ರಾಧಿಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂಬ ವಿಚಾರ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯವರಲ್ಲಿ ಮೂಡಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಲಾಗಿದೆ. ರಾಜ್ಯ ಮಟ್ಟದಲ್ಲಿ ಕನ್ನಡ ಬಳಕೆಗಿರುವ ತೊಂದರೆಗಳಿಗೂ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಪ್ರಾಧಿಕಾರದಿಂದ ವಿವಿಧ ಕಛೇರಿಗಳನ್ನು ತಪಾಸಣೆ ಮಾಡಿ ಸೂಕ್ತ ಸಲಹೆ, ಸೂಚನೆ, ಎಚ್ಚರಿಕೆಗಳನ್ನು ನೀಡಲಾಗುತ್ತಿದೆ ಹೊರನಾಡುಗಳ ವಿಶ್ವವಿದ್ಯಾಲಯ/ಕಾಲೇಜುಗಳಲ್ಲಿ ಕನ್ನಡ ಎಂ.ಎ ಅಭ್ಯಾಸ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಹೊಸ ಯೋಜನೆಯನ್ನು 2005-06ರಿಂದ ಪ್ರಾರಂಭಿಸಲಾಗಿದೆ.

ಕಂಪ್ಯೂಟರುಗಳ ಬಳಕೆಯಿಂದ ಕನ್ನಡ ಬಳಕೆಗೆ ಹಿನ್ನಡೆಯುಂಟಾಗಬಾರದೆಂಬ ಕಾರಣದಿಂದ “ನುಡಿ” ಎಂಬ ಕಂಪ್ಯೂಟರ್ ಅಕ್ಷರ ತಂತ್ರಾಂಶವನ್ನು ಕರ್ನಾಟಕ ಗಣಕ ಪರಿಷತ್ತಿನ ಮೂಲಕ ಸಿದ್ಧಗೊಳಿಸಲಾಗಿದೆ. ಕಾಲಕಾಲಕ್ಕೆ ಇದನ್ನು ಪರಿಷ್ಕರಿಸಿ ವಿವಿಧ ಅನುಕೂಲತೆಗಳನ್ನು ಕಲ್ಪಿಸಿ, "ನುಡಿ-4"ನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರಕ್ಕೆ ಸಲಹೆಗಳನ್ನು ನೀಡಲು ಕೆಳಕಂಡ ವರದಿಗಳನ್ನು ಸಲ್ಲಿಸಲಾಗಿದೆ:-.

1) ಶಿಕ್ಷಣ ತಜ್ಞರ ಸಲಹಾ ಸಮಿತಿಯ ಮಧ್ಯಂತರ ವರದಿ
     ಪ್ರೊ. ಚಂದ್ರಶೇಖರ ಪಾಟೀಲರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ದಿನಾಂಕ: 11-3-1999ರಂದು ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ 01 ರಿಂದ 07ನೆಯ ತರಗತಿಯವರೆಗೆ ಶಿಕ್ಷಣ ಮಾಧ್ಯಮವು ಕಡ್ಡಾಯವಾಗಿ ಕನ್ನಡ (ಅಥವ ವಿದ್ಯಾರ್ಥಿಯ ಮಾತೃಭಾಷೆ) ವಾಗಿರಬೇಕು ಎಂಬ ಶಿಫಾರಸ್ಸು ಹಾಗೂ ಇನ್ನಿತರ ಶಿಫಾರಸ್ಸುಗಳನ್ನು ಈ ವರದಿ ಒಳಗೊಂಡಿದೆ.

2) ಶಿಕ್ಷಣ ಮತ್ತು ಮಾಧ್ಯಮ ನೀತಿ ನಿರೂಪಣಾ ವರದಿ
     ಪ್ರೊ. ಬರಗೂರು ರಾಮಚಂದ್ರಪ್ಪನವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2001ರ ಜನವರಿಯಲ್ಲಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ 01 ರಿಂದ 07ನೆಯ ತರಗತಿಯವರೆಗೆ ಕನ್ನಡ (ಅಥವ ವಿದ್ಯಾರ್ಥಿಯ ಮಾತೃಭಾಷೆ)ವೇ ಶಿಕ್ಷಣ ಮಾಧ್ಯಮವಾಗಬೇಕು-ಎಂಬುದರೊಂದಿಗೆ ಇತರ ಹಲವು ಶಿಫಾರಸ್ಸುಗಳನ್ನು ಈ ವರದಿಯು ಒಳಗೊಂಡಿದೆ.

ಈ ಎರಡೂ ವರದಿಗಳ ಅನೇಕ ಅಂಶಗಳನ್ನು ಸರ್ಕಾರವು ಜಾರಿಗೊಳಿಸಿದೆ. ಪ್ರಥಮ ಹಂತವಾಗಿ 1ರಿಂದ 4ನೆಯ ತರಗತಿಯವರೆಗೆ - ಶಿಕ್ಷಣ ಮಾಧ್ಯಮವು ಕನ್ನಡ/ ಮಾತೃಭಾಷೆಯಾಗಿರಬೇಕೆಂದು ಸರಕಾರವು ಆದೇಶ ಹೊರಡಿಸಿದ್ದು, ಅದನ್ನು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಸರಕಾರೀ ಆದೇಶಕ್ಕೆ ತಡೆಯಾಜ್ಞೆ ಪಡೆದಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಪ್ರಕರಣದಲ್ಲಿ ಪ್ರತಿವಾದಿಯಾಗಿ ಸ್ವಯಂಪ್ರೇರಣೆಯಿಂದ ಸೇರ್ಪಡೆಗೊಂಡು, ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆಯಲು ಮತ್ತು ಸದರಿ ಅರ್ಜಿಯನ್ನು ವಜಾ ಮಾಡಲು ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದೆ.

ಪ್ರಾಧಿಕಾರದ ಶಿಫಾರಸ್ಸಿನನ್ವಯ ಬಿ.ಇ ಮತ್ತು ಎಂ.ಬಿ.ಬಿ.ಎಸ್ ತರಗತಿಗಳ ಮೊದಲೆರಡು ಸೆಮಿಸ್ಟರುಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಜಾರಿಗೊಳಿಸಲಾಗಿದೆ. ಮೇಲ್ಕಂಡ ವರದಿಯ ಶಿಫಾರಸ್ಸಿನಂತೆ 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಎಲ್ಲ ಉದ್ಯೋಗಗಳಲ್ಲೂ ಶೇಖಡಾ 5ರಷ್ಟು ಸ್ಥಾನಗಳನ್ನು ಮೀಸಲಾಗಿಟ್ಟು ಸರ್ಕಾರವು ಆದೇಶ ಹೊರಡಿಸಿದೆ. ಅದೇ ರೀತಿ ಅಂತಹ ವಿದ್ಯಾಗಳಿಗೆ ಉನ್ನತ ಶಿಕ್ಷಣದಲ್ಲಿ ಸಹ ಶೇಖಡಾ 5ರಷ್ಟು ಸ್ಥಾನಗಳನ್ನು ಕಾದಿರಿಸಲು ಸರ್ಕಾರವು ಆದೇಶ ಹೊರಡಿಸಿದೆ.

3) ಗಡಿನಾಡು ಅಧ್ಯಯನ ವರದಿ
      ಸರ್ಕಾರವು ಗಡಿನಾಡು ಅಧ್ಯಯನ ಆಯೋಗವನ್ನು ರಚಿಸಿ ಅದಕ್ಕೆ ಶ್ರೀ ವಾಟಾಳ್ ನಾಗರಾಜ್ ಅವರು ಅಧ್ಯಕ್ಷರಾಗಿದ್ದು ಅವರು ಮಧ್ಯಂತರ ವರದಿಯನ್ನು ಸಲ್ಲಿಸಿದ ನಂತರ ಗಡಿನಾಡು ಅಧ್ಯಯನ ಆಯೋಗದ ಜವಾಬ್ದಾರಿಯನ್ನು ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಿತು. ಪ್ರೊ. ಬರಗೂರು ರಾಮಚಂದ್ರಪ್ಪನವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸಮಗ್ರ ವರದಿಯನ್ನು "ಗಡಿನಾಡು ಅಧ್ಯಯನ ವರದಿ" ಎಂಬ ಹೆಸರಿನಲ್ಲಿ ಸಿದ್ಧಗೊಳಿಸಿ ಮಾರ್ಚಿ 2002ರಲ್ಲಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಈ ವರದಿಯ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಲು ಸರಕಾರವು ಅವಶ್ಯ ಕ್ರಮ ಕೈಗೊಳ್ಳುತ್ತಿದೆ.

ಡಾ|| ಸರೋಜಿನಿ ಮಹಿಷಿ ವರದಿ
ಕನ್ನಡಿಗರಿಗೆ ಉದ್ಯೋಗಗಳಲ್ಲಿ ಸೂಕ್ತ ಅವಕಾಶಗಳನ್ನು ಒದಗಿಸುವ ಬಗ್ಗೆ ಈ ವರದಿಯಲ್ಲಿ ಅನೇಕ ಶಿಫಾರಸ್ಸುಗಳು ಇದ್ದು, ಹಲವು ಶಿಫಾರಸ್ಸುಗಳನ್ನು ಜಾರಿಗೊಳಿಸಲಾಗಿದೆ. ಖಾಸಗೀ ಮತ್ತು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರನ್ನು ನೇಮಕ ಮಾಡಿಕೊಳ್ಳುತ್ತಿಲ್ಲವೆಂಬ ಬಗ್ಗೆ ಪರಿಶೀಲಿಸಿ, ಪ್ರಾಧಿಕಾರವು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯವರೊಂದಿಗೆ ಪತ್ರ ವ್ಯವಹರಿಸಲಾಗಿ, ಈ ಬಗ್ಗೆ ಮಾನ್ಯ ಕೈಗಾರಿಕಾ ಸಚಿವರು ಸದರಿ ಇಲಾಖೆಯ ಉನ್ನತಾಧಿಕಾರಿಗಳ ಸಭೆಯನ್ನು ಕರೆದಿದ್ದು, ಅದರಲ್ಲಿ ಪ್ರಾಧಿಕಾರದ ಅಧ್ಯಕ್ಷರು, ಸರಕಾರದ ಮುಖ್ಯ ಕಾರ್ಯದರ್ಶಿಗಳು ಸಹ ಭಾಗವಹಿಸಿದ್ದರು. ಈ ಸಭೆಯಲ್ಲಿ ಮಾನ್ಯ ಕೈಗಾರಿಕಾ ಸಚಿವರು ಭರವಸೆ ನೀಡಿದಂತೆ, ಈ ವಿಚಾರವನ್ನು ಅಗಿಂದಾಗ್ಗೆ ವಿಮರ್ಶಿಸಿ ಸೂಕ್ತ ಮಾರ್ಗದರ್ಶನ ನೀಡಲು ಸಚಿವ ಸಂಪುಟದ ಉಪಸಮಿತಿಯೊಂದನ್ನು ಸಹ ರಚಿಸಲಾಗಿದೆ. ಕನ್ನಡಿಗರಿಗೆ ಸೂಕ್ತ ಪ್ರಮಾಣದ ಉದ್ಯೋಗ ನೀಡುವ ಬಗ್ಗೆ ಖಾಸಗೀ ಕೈಗಾರಿಕೆಗಳು ಹಾಗೂ ಕಂಪನಿಗಳಿಗೆ ಮಾನ್ಯ ಕೈಗಾರಿಕಾ ಸಚಿವರು ಬಹಿರಂಗವಾಗಿ ಎಚ್ಚರಿಕೆಯನ್ನು ಸಹ ನೀಡಿರುತ್ತಾರಲ್ಲದೆ, ಇಲಾಖೆಯ ಅಧಿಕಾರಿಗಳಿಗೆ ಸಹ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ.

ಕನ್ನಡ ನಾಡಿನಲ್ಲಿ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡಲು ಅನುಕೂಲ ವಾಗುವಂತೆ, ವಾಣಿಜ್ಯ ಸಂಸ್ಥೆಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕೆಂಬ ಬಗ್ಗೆ ಪ್ರಾಧಿಕಾರವು ಕೆಲಸ ಮಾಡುತ್ತಾ ಬಂದಿದ್ದು, ಇದರಿಂದ ಸಾಕಷ್ಟು ಪ್ರಯೋಜನವಾಗಿದೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸಲು ಸಲಹೆ ನೀಡುವ ಬಗ್ಗೆ ಕರ್ನಾಟಕ ಸರ್ಕಾರವು ನೇಮಿಸಿರುವ ಸಮಿತಿಗೆ ಪತ್ರ ಬರೆದು ಮಹಾಜನ್ ವರದಿ ಜಾರಿಯ ಬಗ್ಗೆ ಸದರಿ ಸಮಿತಿಗೆ ಅಭಿಪ್ರಾಯವನ್ನು ತಿಳಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಮತ್ತು ಕನ್ನಡಿಗರ ಹಿತರಕ್ಷಣೆಯ ಬಗ್ಗೆ ಕೈಗೊಂಡಿರುವ ಕೆಲವು ಕ್ರಮಗಳನ್ನು ಸಂಕ್ಷಿಪ್ತವಾಗಿ ಮೇಲೆ ವಿವರಿಸಲಾಗಿದೆ. ಇವೇ ಅಲ್ಲದೆ ಸಾಂದರ್ಭಿಕವಾಗಿ, ಕನ್ನಡದ ಹಿತಕ್ಕೆ ಧಕ್ಕೆ ಉಂಟಾಗಿರುವುದು ಗಮನಕ್ಕೆ ಬಂದ ಎಲ್ಲ ಸಂದರ್ಭಗಳಲ್ಲಿಯೂ ಸೂಕ್ತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.